ರಂಗ ನಕ್ಷತ್ರ - 02
Interviews

ರಂಗ ನಕ್ಷತ್ರ - 02

calendar_today2026-07-23person By Vinod Manchi
ರಂಗಭೂಮಿಯ ಅಪ್ರತಿಮ ಬಹುಮುಖ ಪ್ರತಿಭೆ, ನಿಪುಣ ಕಲಾವಿದ, ನಿರ್ದೇಶಕ, ಮೇಕಪ್ ಕಲಾವಿದ ಹಾಗೂ ರಂಗಸಜ್ಜಿಕೆಯ ರೂವಾರಿಯಾಗಿರುವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಾಂಡುರಂಗ ಪ್ರಭು ಪರ್ಕಳ ಅವರು ಹಲವು ದಶಕಗಳಿಂದ ಕನ್ನಡ ಮತ್ತು ತುಳು ರಂಗಭೂಮಿಗೆ ತಮ್ಮದೇ ಆದ ವಿಶಿಷ್ಟ ಕೊಡುಗೆಯನ್ನು ನೀಡುತ್ತಾ, ಕಲಾಸೇವೆಯಲ್ಲಿ ಅಚಲ ಹೆಜ್ಜೆ ಇಡುತ್ತಾ ಬಂದಿದ್ದಾರೆ. ಅನೇಕ ಸಂಘ-ಸಂಸ್ಥೆಗಳ ನಾಟಕಗಳಿಗೆ ನಿರ್ದೇಶನ ನೀಡಿ, ತಮ್ಮ ಸೃಜನಶೀಲತೆ, ಕಲಾನಿಷ್ಠೆ ಹಾಗೂ ಶ್ರದ್ಧೆಯಿಂದ ಅಸಂಖ್ಯಾತ ಕಲಾಭಿಮಾನಿಗಳ ಮನಸ್ಸಿನಲ್ಲಿ ಅಚ್ಚಳಿಯದ ಸ್ಥಾನವನ್ನು ಗಳಿಸಿರುವ ಪಾಂಡಣ್ಣ ಅವರು ಎಲ್ಲರ ಪ್ರೀತಿಯ ವ್ಯಕ್ತಿತ್ವವಾಗಿ ಹೊರಹೊಮ್ಮಿದ್ದಾರೆ. ತುಳು ಚಿತ್ರಗಳಾದ "ಬಲೇ ತೆಲಿಪಾಲೇ" ಸೇರಿದಂತೆ ಕೊಂಕಣಿ ಸಿನಿಮಾಗಳಲ್ಲಿಯೂ ಅಭಿನಯಿಸಿ, ಅನೇಕ ನಾಟಕಗಳಲ್ಲಿ ತಮ್ಮ ಅದ್ಭುತ ಅಭಿನಯದ ಮೂಲಕ ಕಲಾರಸಿಕರ ಅಪಾರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ತಮ್ಮ ದೇವಿ ದಯಾ ಆರ್ಟ್ಸ್, ಪರ್ಕಳ ಸಂಸ್ಥೆಯ ಮೂಲಕ ಉಡುಪಿ ಮಾತ್ರವಲ್ಲದೆ ಕರ್ನಾಟಕದ ವಿವಿಧ ಜಿಲ್ಲೆಗಳು ಹಾಗೂ ಹೊರರಾಜ್ಯಗಳಲ್ಲಿಯೂ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಗಣೇಶೋತ್ಸವ ಮೆರವಣಿಗೆಗಳಲ್ಲಿ ಕಲಾವಿದರನ್ನು ಒಗ್ಗೂಡಿಸಿ, ಕೀಲುಕುದುರೆ, ಗೊಂಬೆ ಬಳಗ ಹಾಗೂ ವೈವಿಧ್ಯಮಯ ಕಲಾಪ್ರದರ್ಶನಗಳ ಮೂಲಕ ವಿಶಿಷ್ಟ ಛಾಪು ಮೂಡಿಸಿದ್ದಾರೆ. ವಿಶೇಷವಾಗಿ, ಮೆರವಣಿಗೆಗಳಲ್ಲಿ ಅವರು ರೂಪಿಸುವ ಸ್ಥಬ್ಧ ಚಿತ್ರಗಳ (ಟ್ಯಾಬ್ಲೋ) ವಿನ್ಯಾಸಗಳು ಹಾಗೂ ಗೊಂಬೆ ಬಳಗದ ಪ್ರದರ್ಶನಗಳು ನೋಡುಗರ ಮನಸೆಳೆಯುವಂತಿದ್ದು, ಪ್ರತಿಯೊಂದು ಕಾರ್ಯಕ್ರಮಕ್ಕೂ ವಿಶೇಷ ಮೆರುಗು ನೀಡುತ್ತವೆ. ಅವರ ಕಲ್ಪನಾಶಕ್ತಿ ಮತ್ತು ಕಲಾತ್ಮಕ ನಿರೂಪಣೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಸರಳ, ಸೌಮ್ಯ ಹಾಗೂ ಸ್ನೇಹಪರ ವ್ಯಕ್ತಿತ್ವದ ಪಾಂಡುರಂಗ ಪ್ರಭು ಪರ್ಕಳ ಅವರು ಎಲ್ಲರೊಂದಿಗೆ ನಗುಮುಖದಿಂದ ಬೆರೆತು, ಅಪಾರ ಪ್ರೀತಿ ಮತ್ತು ಗೌರವವನ್ನು ಸಂಪಾದಿಸಿದ್ದಾರೆ. ಅವರ ಅಪೂರ್ವ ಕಲಾಸೇವೆಯನ್ನು ಗುರುತಿಸಿ ಅನೇಕ ಪ್ರಶಸ್ತಿ-ಪುರಸ್ಕಾರಗಳು ಅವರನ್ನು ಅರಸಿ ಬಂದಿವೆ. ಮುಂದಿನ ದಿನಗಳಲ್ಲಿಯೂ ತಮ್ಮ ರಂಗಯಾನ ಇನ್ನಷ್ಟು ಯಶಸ್ಸಿನ ಶಿಖರಗಳನ್ನು ಏರಲಿ. ಇನ್ನಷ್ಟು ಸಂಘ-ಸಂಸ್ಥೆಗಳು ಅವರ ಪ್ರತಿಭೆಯನ್ನು ಗುರುತಿಸಿ ಗೌರವಿಸಲಿ. ರಂಗಭೂಮಿಯ ಅಮೂಲ್ಯ ಆಸ್ತಿಯಾಗಿರುವ ಪಾಂಡುರಂಗ ಪ್ರಭು ಪರ್ಕಳ ಅವರಿಗೆ ಕಲಾಮಾತೆಯ ಆಶೀರ್ವಾದ ಸದಾ ಲಭಿಸಲಿ; ಉತ್ತಮ ಆರೋಗ್ಯ, ಆಯುರಾರೋಗ್ಯ ಹಾಗೂ ಇನ್ನಷ್ಟು ಸಾಧನೆಗಳು ಅವರ ಪಾಲಾಗಲಿ ಎಂದು ಹಾರ್ದಿಕವಾಗಿ ಹಾರೈಸುತ್ತೇವೆ.